ಅಮಪುರಿ

	ಗಟಿಫೆರೀ(ಕ್ಲೂಸಿಯೇಸೀ) ಕುಟುಂಬಕ್ಕೆ ಸೇರಿದ ವನ್ಯವೃಕ್ಷ. ಗಾರ್ಸೀನಿಯ ಇಂಡಿಕ ಇದರ ಸಸ್ಯವೈಜ್ಞಾನಿಕ ಹೆಸರು. ಇದಕ್ಕೆ ಕನ್ನಡದಲ್ಲಿ ಪುನರ್ಪುಳಿ, ಮುರ್ಗಲ, ಮುರ್ಗಿನ ಹುಳಿ ಮರ ಎಂಬ ಇತರ ಹೆಸರುಗಳೂ ಉಂಟು. ಇಂಗ್ಲಿಷಿನಲ್ಲಿ ಇದನ್ನು ವೈಲ್ಡ್  ಮ್ಯಾಂಗೋಸ್ಟೀನ್ ಎನ್ನುತ್ತಾರೆ. ಕೊಂಕಣ ಕರಾವಳಿ ಪ್ರದೇಶದಲ್ಲಿ ಹೆಚ್ಚು ವ್ಯಾಪಕವಾಗಿ ಬೆಳೆಯುತ್ತದೆ. ಎಲೆ ಅಗಲ. ಗಂಡು ಮತ್ತು ಹೆಣ್ಣು ಹೂಗಳು ಗೊಂಚಲಾಗಿ ಕಕ್ಷಸ್ಥವಾಗಿರುವುವು. ದಪ್ಪವಾದ ಪುಷ್ಪಪತ್ರಗಳು 4-5. ನಾಲ್ಕು ಪುಷ್ಪದಳಗಳೂ ಅಧಿಕಸಂಖ್ಯೆಯ ಕೇಸರಗಳೂ ಇವೆ. 4-8 ರವರೆಗೆ ಅಂಡ ಕೋಶದ ವಿಭಾಗಗಳಿರುತ್ತವೆ. ಹಣ್ಣುಗಳು ಗುಂಡು. ಬಣ್ಣ ಉದಾ. ತಿರುಳಿನಲ್ಲಿ 4-8 ಬೀಜಗಳಿವೆ.

	ಕಾಯಿ ಕಾರ ಮತ್ತು ಹುಳಿ. ಔಷಧಿಗೆ ಉಪಯೋಗಿಸುವರು. ಬೀಜದಲ್ಲಿ ಅದರ ತೂಕದ 25% ಭಾಗ ಎಣ್ಣೆ ಇದೆ. ಮುಲಾಮು ತಯಾರಿಸಿ ಚರ್ಮ ವ್ಯಾಧಿಗಳಿಗೆ ಅದನ್ನು ಬಳಸುತ್ತಾರೆ. ಈ ಜಿಡ್ಡನ್ನು ಕೋಕಮ್ ಬೆಣ್ಣೆಯೆಂದು ಮಾರುತ್ತಾರೆ. ಕೋಕಮ್ ಬೆಣ್ಣೆ ಖಾದ್ಯಯೋಗ್ಯ. ತುಪ್ಪದೊಂದಿಗೆ ಕಲಬೆರಕೆ ಮಾಡುವುದುಂಟು. ಅಲ್ಲದೆ ಇದನ್ನು ಸಾಬೂನು, ಮೋಂಬತ್ತಿ ತಯಾರಿಕೆಗೂ ಬಳಸಲಾಗುತ್ತದೆ. ಒಣಗಿದ ಹಣ್ಣಿನ ಸಿಪ್ಪೆಯನ್ನು ಹುಣಿಸೆಹುಳಿಯ ಬದಲಿಗೆ ಬಳಸುತ್ತಾರೆ. ತಂಪಾದ ಪಾನೀಯಕ್ಕೂ ಬಳಸಬಹುದು. ಹಣ್ಣಿನ ರಸ ಪಿತ್ತಶಮನಕಾರಿ, ಹೊಟ್ಟೆ ಹುಳುವನ್ನು ನಾಶಮಾಡುವುದಲ್ಲದೆ ಹೃದಯಕ್ಕೆ ಬಲಕೊಡುತ್ತದೆ ಎನ್ನಲಾಗಿದೆ. ಆಮಶಂಕೆ, ಗಂಟಲು ನೋವು, ಮೂಲವ್ಯಾಧಿಗಳಿಗೆ ಇದು ಔಷಧ. ಇದರ ಮರ ಕಾಗದ ಪಲ್ಪ್ ತಯಾರಿಕೆಗೂ ಒದಗುತ್ತದೆ. ಬೀಜದ ಎಣ್ಣೆ ರಕ್ತಸ್ರಾವ ಬಂಧಕ, ತಂಪುಕಾರಕ, ಉಪಶಮನಕಾರಿ.
(ಎಂ.)
(ಪರಿಷ್ಕರಣೆ: ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ